ಯುರೋಪ್‍ಖಂಡದ ಒಂದು ಚಿಕ್ಕ ಸ್ವತಂತ್ರದೇಶ. ಇದನ್ನು ಅಧಿಕೃತವಾಗಿ ಗ್ರಾಂಡ್ ಡಬೆ ಆಫ್ ಲಕ್ಸೆಂಬರ್ಗ್ ಎಂದು ಕರೆಯಲಾಗಿದೆ. ಯುರೋಪಿನ ವಾಯವ್ಯ ಭಾಗದಲ್ಲಿರುವ ಈ ದೇಶವನ್ನು ಪಶ್ಚಿಮ ಮತ್ತು ಉತ್ತರದಲ್ಲಿ ಬೆಲ್ಜಿಯಮ್, ಈಶಾನ್ಯ ಮತ್ತು ಪೂರ್ವದಲ್ಲಿ ಜರ್ಮನಿ ಮತ್ತು ದಕ್ಷಿಣದಲ್ಲಿ ಫ್ರಾನ್ಸ್ ದೇಶಗಳು ಸುತ್ತುವರಿದಿವೆ. ವಿಸ್ತೀರ್ಣ 2,586 ಚ.ಕಿಮೀ. ಜನಸಂಖ್ಯೆ 4,42,000. ರಾಜಧಾನಿ ಲಕ್ಸೆಂಬರ್ಗ್‍ನಗರ.
 
ಮೇಲ್ಮೈ ಲಕ್ಷಣ: ಲಕ್ಸೆಂಬರ್ಗ್‍ನಲ್ಲಿ ಆರ್ಡೆನ್ ಮತ್ತು ಬಾನ್ ಪೆ ಎಂದು ಕರೆಯುವ ಎರಡು ಭೂ ಭಾಗಗಳಿವೆ. ಲಕ್ಸೆಂಬರ್ಗ್‍ನ ಉತ್ತರ ಪ್ರದೇಶ 1/3 ಭಾಗ ದಟ್ಟಡವಿಯಿಂದ ಕೂಡಿದ ಆರ್ಡೆನ್ನೆಸ್ ಪರ್ವತಗಳಿರುವ ಪ್ರಸ್ಥಭೂಮಿಯಾಗಿದೆ. ಸರಾಸರಿ ಎತ್ತರ 450ಮೀ. ಇಲ್ಲಿ ಕಂಡುಬರುವ ಬರ್ಗ್‍ಪ್ಲಾಟ್ಜ್‍ಬೆಟ್ಟ 559ಮೀ ಎತ್ತರವಾಗಿದ್ದು ಲಕ್ಸೆಂಬರ್ಗ್‍ನ ಅತ್ಯಂತ ಎತ್ತರವಾದ ಪ್ರದೇಶವಾಗಿದೆ. ಆರ್ಡೆನ್ನೆಸ್ ಪರ್ವತಗಳು ಸಿಸ್ಟ್ ಮತ್ತು ಮರಳು ಶಿಲೆಗಳಿಂದ ರಚನೆಯಾಗಿವೆ. ನದಿಗಳಿಂದ, ಪ್ರಕೃತಿ ನಿರ್ಮಿತ ಆಳವಾದ ಕಣಿವೆಗಳಿಂದ ಇಲ್ಲಿನ ಪ್ರದೇಶ ಪ್ರೇಕ್ಷಣೀಯ. ಗುಟ್‍ಲೆಂಡ್ ಅಥವಾ ಒಳ್ಳೆ ಭೂಮಿಯೆಂದು ಪ್ರಸಿದ್ಧವಾದ ಬಾನ್‍ಪೆ ಮೈದಾನ ಫಲವತ್ತಾಗಿದ್ದು ಲಕ್ಸೆಂಬರ್ಗ್‍ನ ದಕ್ಷಿಣ ಭಾಗದ 2/3ಭಾಗ ಕ್ಷೇತ್ರವನ್ನಾವರಿಸಿದೆ. ಅಟರ್ಟ, ಅಲ್‍ಜ಼ೆಟ್, ಷೂರ್ ಪೆಟ್ರುಸ್ಸೆ ಮತ್ತು ಮೊಜ಼ೆಲ್ ಈ ದೇಶದ ಪ್ರಮುಖ ನದಿಗಳು. ಜರ್ಮನಿಗೆ ಹೊಂದಿಕೊಂಡಂತಿರುವ ದೇಶದ ಪೂರ್ವದಂಚಿನ ಭಾಗಕ್ಕೆ ಈ ನದಿಗಳೆ ಗಡಿಗಳಂತಿವೆ. ಉತ್ತರಾಭಿಮುಖವಾಗಿ ಹರಿದು ಷೂರ್ ನದಿಗೆ ಸೇರುವ ಅಲ್‍ಜ಼ೆಟ್ ನದಿ ಬಾನ್‍ಪೇ ಮೈದಾನದ ಜೀವನಾಡಿ ಎನಿಸಿಕೊಂಡಿದೆ.

ವಾಯುಗುಣ: ಲಕ್ಸೆಂಬರ್ಗ್‍ನ ಬಹಳಷ್ಟು ಭಾಗದಲ್ಲಿ ತಂಪಾದ ಹಾಗೂ ತೇವಾಂಶ ಭರಿತ ವಾಯುಗುಣವಿದೆ. ದಕ್ಷಿಣಕ್ಕಿಂತ ಉತ್ತರದಲ್ಲಿ ಹೆಚ್ಚು ತಂಪಾದ ವಾಯುಗುಣವಿದೆ. ಜನವರಿಯಲ್ಲಿ ಸರಾಸರಿ ಉಷ್ಣಾಂಶ 0.70 ಸೆ. ಮತ್ತು ಜುಲೈನಲ್ಲಿ 170 ಸೆ. ವಾರ್ಷಿಕ ಸರಾಸರಿ ಮಳೆ 1000 ಮಿಮೀ. ದಕ್ಷಿಣ ಭಾಗಕ್ಕಿಂತ ಉತ್ತರ ಭಾಗದಲ್ಲಿ ಮಳೆ ಹಂಚಿಕೆ ಉತ್ತಮ. ಆರ್ಡೆನ್ನೆಸ್‍ನಲ್ಲಿ ಹಿಮವೃಷ್ಟಿ ಯಾಗುತ್ತದೆ.

ಜನಸಂಖ್ಯೆ: ಪರ್ವತಗಳಿಂದ ಕೂಡಿದ ಆರ್ಡೆನ್ನೆಸ್‍ನ ಉತ್ತರ ಭಾಗದಲ್ಲಿ ಜನಸಂಖ್ಯೆ ವಿರಳ. ನಗರ ಮತ್ತು ಕೈಗಾರಿಕಾ ಕೇಂದ್ರಗಳಿರುವ ದಕ್ಷಿಣದಲ್ಲಿ ಜನಸಂಖ್ಯೆ ಹೆಚ್ಚು. ದೇಶದ ಜನಸಂಖ್ಯೆಯಲ್ಲಿ ಸೇ. 91.8ಭಾಗ ನಗರವಾಸಿಗಳು. ಉಳಿದವರು ಗ್ರಾಮೀಣವಾಸಿಗಳು. ಬಾನ್‍ಪೆಯ ಫಲವತ್ತಾದ ಪ್ರದೇಶದಲ್ಲಿ ಜನಸಾಂದ್ರತೆ ಹೆಚ್ಚು. ದೇಶದ ರಾಜಧಾನಿಯಾದ ಲಕ್ಸೆಂಬರ್ಗ್ ಹಾಗೂ ಹಲವು ಕೈಗಾರಿಕಾ ನಗರಗಳು ಇಲ್ಲಿವೆ. ದಕ್ಷಿಣದಲ್ಲಿ ನಗರ ಮತ್ತು ಉತ್ತರದಲ್ಲಿ ಗ್ರಾಮೀಣ ಬದುಕಿನ ಜನರನ್ನು ಕಾಣಬಹುದು. ಈ ರಾಷ್ಟ್ರದಲ್ಲಿ ಪೋರ್ಚುಗೀಸ್, ಇಟಲಿ, ಫ್ರೆಂಚ್, ಜರ್ಮನ್, ಬೆಲ್ಜಿಯಮ್ ದೇಶಗಳ ಜನರಿದ್ದಾರೆ. ಜನನ. ದರ ಕಡಿಮೆ. ಕಾರ್ಮಿಕರ ಕೊರತೆಯಿದೆ. ಇಲ್ಲಿನ ಜನಸಂಖ್ಯೆಯ   1/4 ಭಾಗದಷ್ಟು ಮಂದಿ ವಿದೇಶಗಳಲ್ಲಿ ಜನಿಸಿದವರಾಗಿದ್ದಾರೆ.

ದೇಶದ ಜನಸಂಖ್ಯೆಯಲ್ಲಿ ಸೇ. 97ರಷ್ಟು ರೋಮನ್ ಮತ್ತು ಸೇ. 3 ಪ್ರಾಟೆಸ್ಟೆಂಟ್ ಹಾಗೂ ಯಹೊದ್ಯರು. ಹೆಚ್ಚು ಮಂದಿ ಫ್ರೆಂಚ್ ಭಾಷೆಯನ್ನಾಡುವರು. ಜೊತೆಗೆ ಜರ್ಮನ್ ಮತ್ತು ಲೆಟ್ಜೆಬುರ್ಗಿಷ್ ಭಾಷೆಗಳ ಬಳಕೆಯೂ ಇದೆ. ಫ್ರೆಂಚ್ ಆಡಳಿತ ಭಾಷೆ. ಈ ದೇಶದಲ್ಲಿ ನೂರಕ್ಕೆ ನೂರರಷ್ಟು ಸಾಕ್ಷರತೆಯಿದೆ.
ಆರ್ಥಿಕತೆ: ಲಕ್ಸೆಂಬರ್ಗ್‍ನಲ್ಲಿ ನೈಸರ್ಗಿಕ ಸಂಪನ್ಮೂಲಗಳ ಲಭ್ಯತೆ ಸಾಧಾರಣ. ಹಿಂದೆ ದೇಶದ ಆರ್ಥಿಕ ವ್ಯವಸ್ಥೆ ಹೆಚ್ಚಾಗಿ ಕಬ್ಬಿಣದ ಅದಿರು, ಕಬ್ಬಿಣ ಮತ್ತು ಉಕ್ಕನ್ನಾಧರಿಸಿತ್ತು. ಈಗ ಕಬ್ಬಿಣದ ಅದಿರು ನಿಕ್ಷೇಪದ ಕೊರತೆಯುಂಟಾಗಿದೆ. ಮರ ಮತ್ತು ಜಲಶಕ್ತಿ ಬಿಟ್ಟರೆ ಇತರ ಶಕ್ತಿ ಸಂಪನ್ಮೂಲಗಳ ಕೊರತೆಯಿದೆ. ಇದರಿಂದ ಕೃಷಿ ಮತ್ತು ಕೈಗಾರಿಕಾಭಿವೃದ್ಧಿಗೆ ಅವಕಾಶ ಕಡಿಮೆ. ಕೃಷಿಯೋಗ್ಯ ಭೂಮಿಗಿಂತ ಹುಲ್ಲುಗಾವಲು ಹಾಗೂ ಅರಣ್ಯಗಳ ಕ್ಷೇತ್ರ ಹೆಚ್ಚು. ಹೀಗಾಗಿ ಲಕ್ಸೆಂಬರ್ಗ್‍ನಲ್ಲಿ ಪಶುಪಾಲನೆ ಪ್ರಧಾನವಾದುದು. ದನ, ಕುರಿ, ಹಂದಿ ಮತ್ತು ಕೋಳಿ ಸಾಕಣೆ ಹೆಚ್ಚು. ಗೋದಿ, ಬಾರ್ಲಿ, ಓಟ್ಸ್, ಆಲೂಗೆಡ್ಡೆ ಬೆಳೆದರೂ ಕೃಷಿ ಉತ್ಪನ್ನಗಳಿಗಿಂತ ಪಶುಸಂಗೋಪನಾ ವಸ್ತುಗಳ ಉತ್ಪಾದನೆ ಹೆಚ್ಚು. ಮೊeóÉಲ್ ನದಿ ಬಯಲಿನಲ್ಲಿ ದ್ರಾಕ್ಷಿ ಬೇಸಾಯ ಹೆಚ್ಚು.

ಕಬ್ಬಿಣ ಮತ್ತು ಉಕ್ಕು, ಟೈರ್, ರಾಸಾಯನಿಕ ವಸ್ತುಗಳು ಮತ್ತು ಫೇಬ್ರಿಕೇಟಿಂಗ್ ಲೋಹಗಳನ್ನು ತಯಾರಿಸುವ ಉದ್ದಿಮೆಗಳಿವೆ. ಬಹಳಷ್ಟು ಕೈಗಾರಿಕೆಗಳು ಬಹುರಾಷ್ಟ್ರೀಯ ಕಂಪನಿಗಳ ನಿರ್ವಹಣೆಗೆ ಸೇರಿವೆ.

ಲಕ್ಸೆಂಬರ್ಗ್‍ನಲ್ಲಿ ಉತ್ತಮ ರಸ್ತೆ (5,100 ಕಿಮೀ), ರೈಲು (270 ಕಿಮೀ), ಒಳನಾಡಿನ ಜಲಸಾರಿಗೆ ಮತ್ತು ವಾಯು ಮಾರ್ಗಗಳ ಸೌಲಭ್ಯವಿದೆ. ಆಧುನಿಕ ವಿದ್ಯುತ್ ಚಾಲಿತ ಹಾಗೂ ದ್ವಿ ಮಾರ್ಗವುಳ್ಳ ರೈಲು ಸಂಚಾರ ಉತ್ತಮವಾಗಿದೆ. ಮೊeóÉಲ್ ನದಿಯಲ್ಲಿ ನೌಕಾಯಾನ ಸೌಲಭ್ಯವಿದೆ. ರಾಜಧಾನಿ ಲಕ್ಸೆಂಬರ್ಗ್ ನಗರದ ಹೊರವಲಯದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಿದೆ.

ಆಡಳಿತ: ಇದು ಸಂವಿಧಾನಿಕ ರಾಜಪ್ರಭುತ್ವ ಹೊಂದಿರುವ ದೇಶ. ಕಾರ್ಯನಿರ್ವಹಣಾ ಆಡಳಿತ ಅನುವಂಶೀಯತೆಯಿಂದ ಬಂದಗ್ರಾಂಡ್ ಡ್ಯೂಕ್‍ಗೆ ಸೇರಿರುತ್ತದೆ. ಆತ ಪ್ರಧಾನಮಂತ್ರಿಯನ್ನು ಆಯ್ಕೆ ಮಾಡುವನು. ದೇಶದ ಆಡಳಿತ ಪ್ರಧಾನಮಂತ್ರಿ ಮತ್ತು ಚುನಾಯಿತ ಪ್ರತಿನಿಧಿಗಳಿಂದ ರಚನೆಯಾದ ಸಚಿವ ಸಂಪುಟದಿಂದ ನಡೆಯುತ್ತದೆ. ಆಡಳಿತದ ದೃಷ್ಟಿಯಿಂದ ದೇಶವನ್ನು ಮೂರು ಜಿಲ್ಲೆಗಳಾಗಿ ವಿಂಗಡಿಸಲಾಗಿದ್ದು, ಪ್ರತಿ ಜಿಲ್ಲೆಯಲ್ಲೂ ಕೇಂದ್ರ ಸರ್ಕಾರದಿಂದ ನೇಮಿಸಲ್ಪಟ್ಟ ಕಮೀಷನರ್ ಮುಖ್ಯಸ್ಥನಾಗಿರುತ್ತಾನೆ. ಪ್ರತಿ ಜಿಲ್ಲೆಯನ್ನೂ ಕಾಂಟನ್ಸ್‍ಗಳಾಗಿಯೂ ಪುರಸಭೆಗಳಾಗಿಯೂ ವಿಂಗಡಿಸಲಾಗಿದೆ. ಪುರಸಭೆಯಲ್ಲಿ ಚುನಾಯಿತ ಕೌನ್ಸಿಲ್ ಮತ್ತು ಮಹಾಪೌರರ ಆಡಳಿತ ವ್ಯವಸ್ಥೆಯಿರುತ್ತದೆ. 
ರಾಜಧಾನಿ ಲಕ್ಸೆಂಬರ್ಗ್‍ನ ಜನಸಂಖ್ಯೆ 75,377. ನಗರ ಪೆಟ್ರುಸ್ಸೆ ಮತ್ತು ಅಲ್‍ಜóಟ್ ನದಿ ಕಣಿವೆಯ ಎತ್ತರದ ನಡು ಪ್ರದೇಶದಲ್ಲಿದೆ. 1500ರಲ್ಲಿ ನಿರ್ಮಿಸಿದ ಅರಮನೆ, ಸು. 1600ರ ಮೊದಲಭಾಗದಲ್ಲಿ ಕಟ್ಟಿದ ಪ್ರಸಿದ್ಧ ಗಾತ್‍ರ ನಾಟ್ರಡಾಮ್ ಕತೀಡ್ರಲ್ ಮತ್ತು 1800 ರಲ್ಲಿ ಕಟ್ಟಿದ ಟಾನ್‍ಹಾಲ್ ಕಟ್ಟಡಗಳಿಂದ ನಗರ ಶೋಭಿಸುತ್ತಿದೆ. ರೋಮನ್ನರು ಕಟ್ಟಿದ್ದ ಕೋಟೆ ಮತ್ತು ಸುತ್ತುಗೋಡೆಗಳ ಅವಶೇಷಗಳಿವೆ.

ಗ್ರಾಂಡ್ ಡ್ಯೂಕಲ್ ಇನ್‍ಸ್ಟಿಟ್ಯೂಟ್ ಎಂಬುದು ಲಕ್ಸೆಂಬರ್ಗ್‍ನ ಪ್ರಮುಖ ಸಾಂಸ್ಕøತಿಕ ಸಂಸ್ಥೆ. ಇದು ಇತಿಹಾಸ, ವಿಜ್ಞಾನ, ವೈದ್ಯಕೀಯ, ಭಾಷೆ, ಜಾನಪದ, ಕಲೆ ಮುಂತಾದವುಗಳ ಸಂರಕ್ಷಣೆಗಾಗಿ ಶ್ರಮಿಸುತ್ತದೆ. ಇಲ್ಲಿನ ರಾಷ್ಟ್ರೀಯ ಐತಿಹಾಸಿಕ ಮತ್ತು ಕರಕುಶಲ ಕಲೆಗಳ ಸಂಗ್ರಹಾಲಯ ಸುಪ್ರಸಿದ್ಧವಾದುದು. ಆಕರ್ಷಣೀಯ ವರ್ಣ ಚಿತ್ರಗಳು, ಸಾಂಪ್ರದಾಯಿಕ ಮತ್ತು ಆಧುನಿಕ ಶಿಲ್ಪಕಲೆಗಳಿದ್ದು, ಗತಕಾಲದ ಕಲೆಯ ಹಿರಿಮೆಯನ್ನು ಪ್ರತಿಬಿಂಬಿಸುತ್ತವೆ. ಲಕ್ಸೆಂಬರ್ಗ್‍ನ ಗ್ರಾಂಡ್ ಆರ್ಕೆಸ್ಟ್ರ ಆಫ್ ರೇಡಿಯೊ ಟೆಲಿವಿಷನ್ ಪ್ರಸಿದ್ಧವಾದುದು. ಇವಲ್ಲದೆ ಲಕ್ಸೆಂಬರ್ಗ್ ನಗರ ಯುರೋಪಿನ ಅನೇಕ ಆಡಳಿತ ಕಾರ್ಯಗಾರದ ಕೇಂದ್ರ. ಅಂತಾರಾಷ್ಟ್ರೀಯ ಹಣಕಾಸು ಕೇಂದ್ರವಾಗಿರುವುದರಿಂದ ಅನೇಕ ದೇಶ ವಿದೇಶ ಬ್ಯಾಂಕುಗಳಿವೆ. ಯುರೋಪಿಯನ್ ಕೋರ್ಟ್ ಆಫ್ ಜಸ್ಟೀಸ್‍ನ ಕೇಂದ್ರ ಸಹ ಇಲ್ಲಿದೆ.

ಇತಿಹಾಸ: ರೋಮನ್ ಸಾಮ್ರಾಜ್ಯದ ಚಿಕ್ಕ ರಾಜ್ಯಗಳಲ್ಲಿ ಒಂದಾಗಿದ್ದು ಏಳನೆಯ ಹೆನ್ರಿ (1308) ಸಾಮ್ರಾಟನಾದ ಅನಂತರ ಲಕ್ಸೆಂಬರ್ಗ್ ಹೆಚ್ಚು ಪ್ರಸಿದ್ಧಿಗೆ ಬಂತು. 1443ರಲ್ಲಿ ಹಾಬ್ಸ್‍ಬಗ್‍ರ ಸಾಮ್ರಾಜ್ಯದ ಭಾಗವಾಗುವುದಕ್ಕೆ ಮುಂಚೆ ಫ್ರೆಂಚರ ಆಳಿಕೆಯಲ್ಲಿತ್ತು. ರೋಮನ್ ಸಾಮ್ರಾಜ್ಯ ಪತನವಾದ ಅನಂತರ ಫ್ರೆಂಚ್, ಸ್ಪೇನ್, ಆಸ್ಟ್ರಿಯ ಮತ್ತು ನೆದರ್‍ಲೆಂಡ್ ಕೂಡ ಈ ದೇಶವನ್ನು ಆಳಿದವು. ಅನಂತರ ಜರ್ಮನ್ ಲೀಗ್‍ನಲ್ಲಿ ಸೇರಿತು. ಲಕ್ಸೆಂಬರ್ಗ್ ಮತ್ತು ನೆದರ್‍ಲೆಂಡ್ ಕೆಲಕಾಲ ಒಂದೇ ರಾಜಪ್ರಭುತ್ವ ಪಡೆದು ಪ್ರತ್ಯೇಕ ಅಸ್ತಿತ್ವದಲ್ಲಿದ್ದವು. 1867ರ ಲಂಡನ್ ಒಪ್ಪಂದದ ಮೇರೆಗೆ ಲಕ್ಸೆಂಬರ್ಗ್ ಸ್ವತಂತ್ರ ರಾಷ್ಟ್ರವಾಯಿತು.

1815ರಲ್ಲಿ ಫ್ರಾನ್ಸಿನ ಸಾಮ್ರಾಟ ಮೊದಲನೆಯ ನೆಪೋಲಿಯನ್ನನ ಸೋಲಿನ ಅನಂತರ ಸ್ವತಂತ್ರವಾಗಿ ಇದನ್ನು ನೆದರ್‍ಲೆಂಡ್‍ನ ಆಡಳಿಕ್ಕೆ ಸೇರಿಸಲಾಯಿತು. 1890ರ ಹೊತ್ತಿಗೆ ಲಕ್ಸೆಂಬರ್ಗ್ ತನ್ನ ಆಡಳಿತವನ್ನು ನಡೆಸುವಂತಾಗಿತ್ತು. ಮುಂದೆ ಲಕ್ಸೆಂಬರ್ಗ್‍ನ ಸುಧಾರಿತ ಕಾಯಿದೆ ಪ್ರಕಾರ 1919ರಲ್ಲಿ ಚಾರ್ಲೊಟ್ವೆ ಆಡಳಿತವನ್ನು ವಹಿಸಿಕೊಂಡಳು. ಜರ್ಮನಿ ಒಂದನೆಯ ಮತ್ತು ಎರಡನೆಯ ಮಹಾಯುದ್ಧ ಕಾಲಗಳಲ್ಲಿ (1914-18) ಲಕ್ಸೆಂಬರ್ಗ್‍ನ್ನು ಆಕ್ರಮಿಸಿಕೊಂಡಿತ್ತು (1939-45). ಎರಡನೆಯ ಮಹಾಯುದ್ಧದ ಕಾಲದಲ್ಲಿ ಉತ್ತರ ಲಕ್ಸೆಂಬರ್ಗ್‍ನಲ್ಲಿ ನಡೆದ ಬ್ಯಾಟಲ್ ಆಫ್ ಬಲ್ಜ್ ಎಂದು ಹೆಸರಾದ ಕದನದಲ್ಲಿ ಸಾವಿರಾರು ಅಮೆರಿಕದ ಸೈನಿಕರು ಸತ್ತರು. ಹ್ಯಾಮ್ ಎಂಬಲ್ಲಿ ಸತ್ತವರನ್ನೆಲ್ಲಾ ಸಾಮೂಹಿಕವಾಗಿ ಹೂಳಲಾಯಿತು.

1945ರಲ್ಲಿ ಲಕ್ಸೆಂಬರ್ಗ್ ಸಂಯುಕ್ತ ರಾಷ್ಟ್ರಗಳ ಸಂಸ್ಥೆಯ (ಯು.ಎನ್) ಸದಸ್ಯ ರಾಷ್ಟ್ರವಾಯಿತು. 1949 ರಲ್ಲಿ ನ್ಯಾಟೊದ ಸದಸ್ಯತ್ವ ಪಡೆಯಿತು. ಈಗಿನ ದೊರೆ ಪ್ರಿನ್ಸ್ ಹೆನ್ರಿ 2000ದಲ್ಲಿ ಸಿಂಹಾಸನವೇರಿದ. 

 (ಪಿ.ಎಮ್‍ಪಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ